Monday, November 9, 2015

ದಿವಿನಾದ ದೀಪಾವಳಿ

                                           
                                                    ದಿವಿನಾದ ದೀಪಾವಳಿ

                                                 ದೀಪಂ ಜ್ಯೋತಿ ಪರಬ್ರಹ್ಮ
                                                 ದೀಪಂ ಜ್ಯೋತಿ ಜನಾರ್ಧನಃ
                                                 ದೀಪೋ ಮೇ ಹರತೋ ಪಾಪಂ                      
                                                 ದೀಪಂ ಜ್ಯೋತಿ ನಮೋಸ್ತುತೇ


                                     ಕತ್ತಲೆಯಿಂದ   ಬೆಳಕಿನೆಡೆಗೆ , ಅಜ್ಞಾನದಿಂದ ಸುಜ್ಞಾನದೆಡೆಗೆ ನಡೆವುದೇ ದೀಪಾವಳಿ ಹಬ್ಬದ ಆಶಯ . ಕರ್ನಾಟಕದಲ್ಲಿ ನೀರು ತುಂಬುವ ಹಬ್ಬದೊಂದಿಗೆ ಶುರುವಾಗುವ ದೀಪಾವಳಿಯ ಸಂಭ್ರಮ  ಕಡೆಗೆ ಉತ್ಥಾನ ದ್ವಾದಶಿಯಂದು ತುಳಸಿಪೂಜೆ (ಕಿರುದೀಪಾವಳಿ)ಯಂದು ಕೊನೆಗೊಳ್ಳುತ್ತದೆ   .  ದೀಪಗಳ ಸಾಲು ಮನಮೋಹಕವಾಗಿರುತ್ತದೆ .  ಸತ್ಯದ, ಧರ್ಮದ ವಿಜಯವೆಂದೂ  ಈ ಹಬ್ಬ ಆಚರಿಸಲ್ಪಡುತ್ತದೆ . ಅಮಾವಾಸ್ಯೆಯ ಹಿಂದಿನ ದಿನ ನರಕಚತುರ್ದಶಿ , ಹಾಗೂ ಅಮಾವಾಸ್ಯೆಯ ಮಾರನೆಯ ದಿನ ಬಲಿಪಾಡ್ಯಮಿ ಎಂದೂ ಆಚರಿಸುತ್ತೇವೆ .

ಕೃಷ್ಣ ಪಕ್ಷದ ೧೩ನೇ ದಿನವಾದ ನೀರು ತುಂಬುವ ಹಬ್ಬದಂದು ಅಭ್ಯಂಜನ ಮಾಡಿ , ಮನೆಯಲ್ಲಿರುವ ಹಂಡೆ , ಬಿಂದಿಗೆಗಳನ್ನು ತಿಕ್ಕಿ , ಹೊಳೆಯುವಂತೆ ತೊಳೆದು , ನೀರು ತುಂಬಿ , ಅವಕ್ಕೆ ಪೂಜೆ ಮಾಡಿ , ಹಬ್ಬದಡುಗೆ ಮಾಡಿ ಉಣ್ಣುತ್ತೇವೆ .

ಪುರಾಣಗಳು ಹೇಳುವಂತೆ ನರಕಾಸುರ ಎಂಬ ದಾನವನು ಬ್ರಹ್ಮನಿಂದ ' ತನ್ನ ತಾಯಿಯಾದ ಭೂದೇವಿಯಿಂದ ಮಾತ್ರ ತನಗೆ ಸಾವು ಬರುವಂತೆ ವರ ಪಡೆದಿರುತ್ತಾನೆ . ಅವನ ತಾಯಿಯಾದ ಭೂದೇವಿಯೂ ಸಹ ವಿಷ್ಣುವಿನಿಂದ ' ತಾನು ಬಯಸಿದಾಗ ಮಾತ್ರ ತನ್ನ ಮಗನಿಗೆ ಸಾವು ಬರಬೇಕು ' ಎಂಬ ವರ ಪಡೆದಿರುತ್ತಾಳೆ .

ವರ ಪಡೆದ ತನಗೆ ಸಾವು ಬರಲಾರದೆಂದು ನರಕಾಸುರನು ಅಟ್ಟಹಾಸದಿಂದ ಮೆರೆಯುತ್ತಾ ೧೬೦೦೦ ಮಹಿಳೆಯರನ್ನು ಲಪಟಾಯಿಸಿ ಸೆರೆಯಲ್ಲಿಡುತ್ತಾನೆ. ದೇವೇಂದ್ರ ಹಾಗೂ ಇತರ ದೇವತೆಗಳ ಆಗ್ರಹದಿಂದ ಶ್ರೀಕೃಷ್ಣನು ಪ್ರಿಯಸತಿ ಸತ್ಯಭಾಮೆ ಹಾಗೂ ಗರುಡನೊಡಗೂಡಿ ನರಕಾಸುರನ ವಿರುದ್ಧ ಸಮರಕ್ಕಿಳಿಯುತ್ತಾನೆ .  ಆ ದಾನವ ವೀರ ಕೃಷ್ಣನಿಗೆ ಸರಿಸಾಟಿಯಾಗಿ ಯುದ್ಧ ಮಾಡುತ್ತಾ ತನ್ನ ಶಕ್ತಿ ಆಯುಧವನ್ನು ಕೃಷ್ಣನೆಡೆಗೆ ಎಸೆದಾಗ, ಅವನು ಸ್ಮೃತಿ ತಪ್ಪಿ ಬಿದ್ದವನಂತೆ ನಟಿಸುತ್ತಾನೆ. ಆಗ ಜೊತೆಗಿದ್ದ ಸತ್ಯಭಾಮೆಯೂ ಸೇರಿ, ನರಕಾಸುರನನ್ನು ಸಂಹರಿಸುತ್ತಾಳೆ  . ಸತ್ಯಭಾಮೆಯು ವಿಷ್ಣುವಿನ ಹೆಂಡತಿ ಭೂದೇವಿಯ ಅವತಾರವಾದ್ದರಿಂದ, ನರಕಾಸುರನನ್ನು ಅವನು ಪಡೆದ ವರದಂತೆಯೇ  ಸಂಹರಿಸುತ್ತಾಳೆ , ಇದು ನರಕಚತುರ್ದಶಿಯೆಂದು  ಆಚರಿಸಲ್ಪಡುತ್ತದೆ   .

ಕರ್ನಾಟಕದಲ್ಲಿ ನಾ ಕಂಡಂತೆ ಕೆಲವು ವರ್ಷಗಳ ಹಿಂದೆ ಅಮಾವಾಸ್ಯೆಯಂದು ಲಕ್ಷ್ಮಿಪೂಜೆ  ಮಾಡುತ್ತಿರಲಿಲ್ಲ . ಈಗ ಬಹಳ ಜನ ಅಮಾವಾಸ್ಯೆಯ ಸಂಜೆ ಈ ಪೂಜೆ ಮಾಡುತ್ತಾರೆ .

ವಿಷ್ಣು ವಾಮನನ ಅವತಾರದಲ್ಲಿ ಬಲಿಚಕ್ರವರ್ತಿಯನ್ನು ಸಂಹರಿಸುವ ಸಮಯದಲ್ಲಿ ಮನೆಮನೆಗಳಲ್ಲಿ ಅವನ ನೆನಪಲ್ಲಿ ದೀಪ ಬೆಳಗಿ ಸ್ವಾಗತಿಸುವಂತೆ ವರ ನೀಡಿದನೆಂದು  ಪ್ರತೀತಿ . ಹಾಗಾಗಿ ಪಾಡ್ಯದಂದು ಬಲಿಪಾಡ್ಯಮಿ ಎಂದು ಆಚರಿಸುತ್ತೇವೆ . ಅಂದು ಸಂಜೆ  ರೈತಾಪಿ ಜನರು ಗೋವರ್ಧನ ಪೂಜೆ ಮಾಡುತ್ತಾರೆ . ಸೆಗಣಿಯಿಂದ ಗೋವರ್ಧನಗಿರಿಯಂತೆ ಆಕಾರ ಮಾಡಿ , ಅದಕ್ಕೆ ಚೆಂಡು ಹೂವು , ಚಂದನ ಇಟ್ಟು ಮನೆಯ ಬಾಗಿಲುಗಳಿಗೆ, ತುಳಸಿಕಟ್ಟೆಗೆ ಇಡುತ್ತಾರೆ .   ತಲೆಬಾಗಿಲ ಬಳಿ ನಾಲ್ಕು ಮೂಲಗಳಲ್ಲಿ ಹಾಗೂ ಮಧ್ಯೆ ಸೆಗಣಿಯ ಗಿರಿಯಾಕಾರವನ್ನಿಟ್ಟು , ಸುತ್ತಲೂ ಸೆಗಣಿಯಿಂದ ಕೋಟೆಯಂತೆ ಕಟ್ಟಿ ,  ಹಾಲನ್ನು ಮಧ್ಯೆ ಇರುವ ಗಿರಿಯಾಕಾರಕ್ಕೆ ಹುಯ್ಯುತ್ತಾ 'ಬಲೀಂದ್ರ ನ ರಾಜ್ಯ ಹೊನ್ನೋ  ಹೊನ್ನು '  ಎಂದು ಹಾಲು ಕೋಡಿಯಾಗಿ ಹರಿಯುವಂತೆ ಹುಯ್ದು ಸಮೃದ್ಧಿಯನ್ನು ಹಾರೈಸುತ್ತಾರೆ .

ಕಜ್ಜಾಯ , ಹೋಳಿಗೆ , ಚಕ್ಕುಲಿ ಮಾಡಿ ಸವಿಯುತ್ತಾ , ಸಂಜೆ ದೀಪಗಳನ್ನು ಸಾಲುಸಾಲಾಗಿ ಹಚ್ಚಿ , ಅಂಧಕಾರವನ್ನು ತೊಲಗಿಸುತ್ತೇವೆ .  ಪಟಾಕಿ ಸಿಡಿಸುವುದೂ ಒಂದು ಸಂಭ್ರಮ. ಆದರೆ ಈಗ ಹೆಚ್ಚುತ್ತಿರುವ ಜಾಗತಿಕ ತಾಪಮಾನದಿಂದಾಗಿ ಜನರು ಎಚ್ಚೆತ್ತು ವಾಯುಮಾಲಿನ್ಯ, ಶಬ್ದಮಾಲಿನ್ಯ ಕಡಿಮೆ ಮಾಡಲು ಹಾಗೂ ಪಟಾಕಿ ತಯಾರಿಸುವ ಮಕ್ಕಳನ್ನು ಬಾಲಕಾರ್ಮಿಕರಾಗುವುದನ್ನು ತಪ್ಪಿಸಲು , ವಿವೇಚನೆಯುಳ್ಳ ನಾವು ಪಟಾಕಿ ಸಿಡಿಸುವುದನ್ನು ನಿಲ್ಲಿಸಿ , ಬೆಳಕಿನ ಹಬ್ಬವನ್ನು  ಶಾಂತಿ , ಸಮೃದ್ಧಿ ಹಾಗೂ ಪ್ರೀತಿ ಬೆಳೆಸುವ ಕುಟುಂಬದ ಹಬ್ಬವಾಗಿ ಆಚರಿಸೋಣ .


-  ತಾರಾ ಶೈಲೇಂದ್ರ

Tuesday, March 17, 2015

                            ಅವ್ವ
                       

ಇಂದು ಯಾಕೋ ತುಂಬಾ ನೆನಪಾಗ್ತಿದ್ದಾರೆ ನನ್ನ 'ಅವ್ವ' ( ನನ್ನ ಅಜ್ಜಿ ).
ನನ್ನ ಮಾವ 9 ತಿಂಗಳ ನನ್ನನ್ನು ಎತ್ತಿಕೊಂಡು ಅಮ್ಮನಿಗೆ ' ನಮ್ಮನೇಲಿ ಸ್ವಲ್ಪ ದಿನ ಇರಲಿ ' ಎನ್ನುತ್ತಾ ಕರೆದೊಯ್ದು ಸಾಕಿದರು .  ಇನ್ನೂ ಮದುವೆಯಾಗಿರದ ಚಿಕ್ಕಿ , ಅಜ್ಜಿ, ಮಾವಂದಿರು , ಅತ್ತೆಯರು , ಅವರ ಮಕ್ಕಳು ಎಲ್ಲರ ಕಣ್ಮಣಿಯಾಗಿ ಬೆಳೆದ ನನಗೆ ನನ್ನ 'ಅವ್ವ' ಅತ್ಯಂತ ಪ್ರೀತಿಯ ವ್ಯಕ್ತಿಯಾಗಿದ್ದರು .

ಮಾರುದ್ದದ ಕೂದಲಿಗೆ ಮಿಳ್ಳೆ  ಬೆಚ್ಚನೆಯ ಎಣ್ಣೆಯನ್ನು ಹಚ್ಚಿ , ಗಿರಿಗಿರಿದು 4 ಕಾಲಿನ ಜಡೆ ಹಾಕಿ , ಮುಂಗುರುಳ ತೀಡಿ , ಹೂವು ಮುಡಿಸುತ್ತಿದ್ದ ಅವ್ವ , ಸೀಗೆಕಾಯಿ , ಅಂಟುವಾಳದ ಕಾಯಿ ಬೇಯಿಸಿದ ನೀರಿನಲ್ಲಿ ತಲೆ ತೊಳೆದು , ಹಂಡೆ ನೀರನ್ನು ಮೊಗೆಮೊಗೆದು ಎರೆದು , ಮಲೆನಾಡ ಗಾಳಿಯಿಂದಾಗಿ ಶೀತವಾಗಬಾರದೆಂದು ಸಾಂಬ್ರಾಣಿ ಹೊಗೆ ಹಾಕಿ ಕೂದಲೊಣಗಿಸಿ ,  ಬಿಸಿ ಅನ್ನಕ್ಕೆ ತುಪ್ಪ ಹಾಕಿ ತಿನ್ನಿಸುತ್ತಿದ್ದ ಅವ್ವ,
'ಅಡುಗೆ ಹೇಳಿಕೊಟ್ಟು ಬರುವಂಥದ್ದಲ್ಲ ,  ನೀನೆ ಸ್ವಂತ ಪ್ರಯತ್ನದಿಂದ ಕಲಿಯಬೇಕು ' ಎನ್ನುತ್ತಿದ್ದ ಅವ್ವ ,  ಹಾಡು ಹಸೆ ಕಲಿಯದ ಹೆಣ್ಣುಮಕ್ಕಳು ನಿರ್ಗಂಧ ಕುಸುಮದಂತೆ ಎನ್ನುತ್ತಿದ್ದ ಅವ್ವ,  ನಂತರ , ಬೆಂಗಳೂರಿಗೆ ಬಂದು ವಿದ್ಯಾರ್ಥಿ ಜೀವನ ಮುಗಿಸಿ ,  ಕೆಲಸಕ್ಕೆ ಸೇರಿದರೂ , ಬೇಸಿಗೆ ರಜೆಗೆ , ದಸರಾ ರಜೆಗೆ ಬರಲೇಬೇಕೆಂದು ತಾಕೀತು ಮಾಡುತ್ತಿದ್ದ ಅವ್ವ, ಹಾಸಿಗೆಯ ಮೇಲೆ ಅವರದೇ ನೂಲಿನ ಸೀರೆಯಿಂದ ತಾವೇ ಹೊಲಿಯುತ್ತಿದ್ದ ಕೌದಿ ಹಾಸಿ ,  ಬೆಚ್ಚನೆಯ ಪ್ರೀತಿಯ ಅನುಭವ ಕೊಟ್ಟ ಅವ್ವ, ರಾತ್ರಿ ನಿದ್ದೆಯಲ್ಲಿ ಅಕಸ್ಮಾತ್ ಸೀನಿದರೆ , ನನಗರಿವಿಲ್ಲದೆ ಹಸಿ ಈರುಳ್ಳಿಯನ್ನು ನನ್ನ ಅಂಗಾಲಿಗೆ ತಿಕ್ಕುತ್ತಿದ್ದ ಅವ್ವ , ಯಾವುದೋ ಹೊಸ ರುಚಿ ಪ್ರಯೋಗ ಮಾಡಲೆಂದು ಸರಿ ರಾತ್ರಿಯಲ್ಲಿ ಎಬ್ಬಿಸಿ ಕೂರಿಸಿಕೊಳ್ಳುತ್ತಿದ್ದ ಅವ್ವ , ಅಪ್ಪ - ಅಮ್ಮ ನನಗೆ ಗದರಲೂ ಬಿಡದೆ , ನನ್ನ ಕೆಂಪು ಕೋಟೆಯಾಗಿದ್ದ ನನ್ನವ್ವ ,

ಇಳಿ ವಯಸ್ಸಿನಲ್ಲಿ ಒಬ್ಬಂಟಿಯಾದರೂ ,  ತನ್ನ ನೇಮ , ನಿಷ್ಠೆಗಳನ್ನು ಬಿಡದೆ ,  ಶನಿವಾರದಂದು ಆ ಶ್ರೀನಿವಾಸನನ್ನೂ , ಸೋಮವಾರದಂದು ಧರ್ಮಸ್ಥಳದ ಮಂಜುನಾಥನನ್ನೂ , ಬೇಲೂರಿನ ಚೆನ್ನಕೇಶವನನ್ನು ಧರೆಗಿಳಿವಂತೆ ಪೂಜಿಸುತ್ತಿದ್ದ ನನ್ನವ್ವ , 'ನಿನ್ನ ಮದುವೆಯನ್ನು ನೋಡದೆ ನಾನು ಹೋಗುವವಳಲ್ಲ ' ಎನ್ನುತ್ತಿದ್ದ ನನ್ನವ್ವ , ನನ್ನ ಮೊದಲ ಸಂಬಳದಲ್ಲಿ ಸೀರೆ ತಂದು ಕೊಟ್ಟಾಗ ಅಪ್ಪಿ ಮುದ್ದಾಡಿದ್ದ ನನ್ನವ್ವ , ಕಡೆಗೂ ನನ್ನ ಹುಟ್ಟುಹಬ್ಬದಂದೇ ನಮ್ಮನ್ನಗಲಿ ಮರೆಯದ ನೆನಪಾಗಿ ಉಳಿದುಬಿಟ್ಟಿದ್ದಾರೆ .

ಎಷ್ಟೋ ವರ್ಷಗಳು ಹುಟ್ಟುಹಬ್ಬವನ್ನು ಯಾರಿಗೂ ಹೇಳದೇ ಸುಮ್ಮನಿದ್ದ ನಾನು , ಅಣ್ಣ ಹೇಳಿದಂತೆ ' ಅವ್ವ ಇದ್ದಿದ್ದರೆ ' ಸದಾ ಖುಷಿಯಿಂದಿರು ' ಎಂದು ಹಾರೈಸುತ್ತಿದ್ದರೆಂದುಕೊಂಡು ನಗುವುದನ್ನು ಅಭ್ಯಸಿಸಿಕೊಂಡರೂ , ಅಂದು ಎಂದಿಗಿಂತಲೂ ಅವರನ್ನು ನೆನೆಯುತ್ತೇನೆ . ಬಹುಶಃ ನನಗೆ ಅತ್ಯಂತ ಪ್ರೀತಿಪಾತ್ರರಾದವರು ವಿವಿಧ ಕಾರಣಗಳಿಗೆ ನನ್ನಿಂದ ದೂರವಾಗುತ್ತಾರೋ ಏನೋ . ಕೆಲವು ಸಲ ಯಾರನ್ನೂ ಮನಸ್ಸಿಗೆ ಹಚ್ಚಿಕೊಳ್ಳದೆ ಕಮಲದೆಲೆಯ ಮೇಲಿನ ನೀರಿನ ಹನಿಯಂತೆ ಇದ್ದುಬಿಡಬೇಕೆನಿಸುತ್ತದೆ .

- ತಾರಾ ಶೈಲೇಂದ್ರ